Posts

ಬೆಚ್ಚಗಿನ ನೆನಪುಗಳು ಇಲ್ಲದವರಿಗೆ ಚಳಿಗಾಲ ಮತ್ತಷ್ಟು ಶೀತಲವಾಗಿರುತ್ತೆ...

 ಹೋಗಿ ಸಾರ್, ಈ ಸೀಸನ್ನಿನಲ್ಲಿ ಐನೂರ್ರೂಪಾಯಿಗಿಂತ ಕಡಿಮೆಗೆ ಇಷ್ಟೊಳ್ಳೆ ಜರ್ಕಿನ್ ಕೊಡೋಕಾಗಲ್ಲ...’ ಅಂತ ಕಡ್ಡಿ ಮುರಿದಂತೆ ಹೇಳುತ್ತಿದ್ದಾನೆ ಅಂಗಡಿಯವನು. ಮೆಜೆಸ್ಟಿಕ್‌ನ ಆಚೆಗಿರುವ ಅಂಗಡಿಗಳಾಗಲೇ ಬಾಗಿಲ ಶಟರ್ ಎಳೆಯುತ್ತಿವೆ. ಊರಿನಿಂದ ಮಿಗಿಸಿ ತಂದಿರುವ ಎರಡು ಸಾವಿರ ರೂಪಾಯಿಯಲ್ಲಿ ಐನೂರು ಜರ್ಕಿನ್‌ಗೇ ಸುರಿದರೆ ಮುಂದಿನ ಊಟಕ್ಕೇನು ಮಾಡುವುದು ಎಂಬ ಚಿಂತೆ ಆ ತರುಣನನ್ನು ಕೊರೆಯಹತ್ತಿದೆ. ಜಿಪ್ ಹರಿದ ಬ್ಯಾಗನ್ನು ಅವುಚಿಕೊಂಡು ಆತ ರಸ್ತೆಯ ಅಂಚಿನಲ್ಲಿ ಬಂದು ವಿಷಾದದಿಂದ ನೋಡುತ್ತ ನಿಂತಿದ್ದಾನೆ. ಕುಟುಕುಟು ಚಳಿಯ ಗಾಳಿಯೊಂದು ಆ ರಾತ್ರಿಯ ಮುನ್ನುಡಿಯಾಗಿ ಬಂದು ಆತನನ್ನು ನಿಷ್ಕರುಣೆಯಿಂದ ತಾಗಿದೆ. ‘ಈಗ ಐದ್ರುಪಾಯಿ ಆರೂಪಾಯಿಗೆಲ್ಲಾ ಕೊಡೋಕಾಗಲ್ಲ ರ್ರೀ... ಹತ್ತರೂಪಾಯಿ ಮಿನಿಮಮ್...’ ಎಂದು ಒರಟಾಗಿ ನುಡಿದು ಮಾಸಿದ ಅಂಗಿಯ ಗಿರಾಕಿಯನ್ನು ಅಕ್ಕಪಕ್ಕದವರು ಲೇವಡಿಯಿಂದ ನೋಡುವಂತೆ ಮಾಡಿದ ಕಡ್ಲೇಕಾಯ್ ಮಾರುವವನು, ಉಬ್ಬಿದ ಹೊಟ್ಟೆಯ ಬೀಟ್ ಪೊಲೀಸ್ ಹತ್ತಿರಕ್ಕೆ ಬರುತ್ತಲೇ ಥಂಡಿ ಹತ್ತಿದ ಕುನ್ನಿಯಂತಾಗಿಬಿಟ್ಟಿದ್ದಾನೆ. ಆ ಪೊಲೀಸ್ ದೊಡ್ಡ ಪ್ಯಾಕೆಟ್ ತುಂಬಾ ಬಿಟ್ಟಿ ಕಡ್ಲೇಕಾಯ್ ಒಯ್ಯುತ್ತಿರುವಾಗ ಈತ ಮನಸ್ಸಿನಲ್ಲೇ ಶಾಪ ಹಾಕುತ್ತ ನಿರ್ವಿಣ್ಣನಾಗಿ ನೋಡುತ್ತಿದ್ದಾನೆ. ಅವೆನ್ಯೂ ರೋಡಿನ ಇಕ್ಕಟ್ಟು ಕ್ರಾಸುಗಳಲ್ಲಿ, ಕಸದ ರಾಶಿಗೆ ಬೆಂಕಿ ಹಚ್ಚಿ ರಾತ್ರಿ ಪಾಳಿಯ ಪೊಲೀಸರು ಕೂತಿದ್ದಾರೆ. ಈಗಷ್ಟೆ ತಟ್ಟಾಡುತ್ತ ಹಾದು ಹೋದ ರಿಯಲ್ ಎಸ್ಟೇಟ್...